Saturday, July 20, 2013

ಮೊದಲ ಮಾತು

ನಾನು ಕೂಡ ಬರೆಯಬೇಕೆಂಬ ಆಸೆ ಬಹಳ ಸಮಯದಿಂದ ಮನಸ್ಸಿನಲ್ಲಿ ಕಣ್ಣಮುಚ್ಚಾಲೆ ಆಡುತ್ತಿತ್ತಾದರೂ ಸೂಕ್ತ ಸಮಯ ಒದಗಿ ಬಂದಿರಲಿಲ್ಲ. ಬರೆಯಬೇಕೆಂದು ಕುಳಿತರೆ, ಯಾವುದರ ಬಗ್ಗೆ ಬರೆಯಲಿ ಎಂಬ ಗೊಂದಲದ ಪ್ರಶ್ನೆ ಮನದಲ್ಲಿ ಹುಟ್ಟಿ, ಉತ್ತರ ಸಿಗದೆ ಆಸೆ ತಣ್ಣಗಾದ ಸಂದರ್ಭಗಳು ಬಹಳಷ್ಟಿವೆ. ಇತ್ತೀಚೆಗಂತೂ ಮುಖಪುಸ್ತಕದಲ್ಲಿ (Facebook) ಶ್ರೀವತ್ಸ ಜೋಷಿಯವರು ಅಂಚೆ (Post)(?) ಮಾಡುತ್ತಿದ್ದ ಕೆಲವು ಬರಹಗಳನ್ನು ಓದಿ, ಬರೆಯಲೇಬೇಕೆಂಬ ಆಸೆ ಪ್ರಬಲವಾಗಿ ಬರೆಯಲು ಪ್ರಾರಂಭಿಸಿದ್ದೇನೆ.

ಇದೇನಪ್ಪ ಸಣ್ಣಪುಟ್ಟ ಚಳ್ಳೆಪಿಳ್ಳೆಗಳೂ ಬರೆಯಲು ಪ್ರಾರಂಭಿಸಿದ್ದಾರೆ, ಸಾಹಿತ್ಯ(?)ದ ಗತಿ ಎಲ್ಲಿಗೆ ಬಂತಪ್ಪ ಎಂದು ಯೋಚಿಸುತ್ತಿದ್ದಿರಾ? ತಪ್ಪೇನಿಲ್ಲ ಬಿಡಿ, ಸಹಜವಾಗಿಯೆ ಇದೆ. ನಾನೊಬ್ಬ ಉತ್ತಮ ಬರಹಗಾರನಲ್ಲ, ಕವಿಯಂತು ಅಲ್ಲವೇ ಅಲ್ಲ. ಒಬ್ಬ ಸಾಮಾನ್ಯ ಇಂಜಿನಿಯರಿಂಗ್ ವಿದ್ಯಾರ್ಥಿ ಅಷ್ಡೇ!. ಇನ್ನು ಇವನ್ಯಾವುದರ ಬಗ್ಗೆ ಬರೆಯುತ್ತಾನೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿ ಬಂದರೆ, ನನ್ನಿಂದ ಬರುವ ಉತ್ತರ- "ಎಲ್ಲದರ ಬಗ್ಗೆ!!". ಹೌದು, ಎಲ್ಲದರ ಬಗ್ಗೆ. ಒಬ್ಬ ಸಾಮಾನ್ಯ ವಿದ್ಯಾರ್ಥಿಯ ತಲೆಯಲ್ಲಿ ಏನೆನೆಲ್ಲಾ ಓಡುತ್ತದೆಯೋ, ಅವುಗಳ ಬಗ್ಗೆಯೆ ಬರೆಯಬೇಕೆಂದು ನಿರ್ಧರಿಸಿದ್ದೇನೆ. ಇಂದು ನಾನು ರಚಿಸಿದ ಕವಿತೆಯನ್ನು ಬರೆದರೆ, ನಾಳೆ ನಾನು ವೀಕ್ಷಿಸಿದ ಚಲನಚಿತ್ರದ ಬಗ್ಗೆ, ನಾಡಿದ್ದು ರಾಜಕೀಯದ ಬಗ್ಗೆ ಬರೆದರೂ ಬರೆದೇನು!!.

ಇನ್ನು ನಾನು ಬರೆದಂತಹ ಬರಹಗಳಲ್ಲಿ ಗುಣಮಟ್ಟ ಇಲ್ಲವೆಂದಾದಲ್ಲಿ, ನೀವು ಬೈದರೂ ನಾನು ಹತಾಶೆಗೊಳಗಾಗಲಾರೆ. ಯಾಕೆಂದರೆ ಬರವಣಿಗೆಯ ವಿಷಯದಲ್ಲಿ ನಾನಿನ್ನೂ ಅಂಬೆಗಾಲಿಕ್ಕುತ್ತರುವ ಪುಟ್ಟಮಗುವೇ!, ಆದ್ದರಿಂದ ತಪ್ಪುಗಳಾಗುವುದು ಸಹಜ ಎಂಬುವುದು ಎನ್ನ ಭಾವನೆ.

ಏನೇ ಇರಲಿ, ಉತ್ತರನ ಪೌರುಷದ ಹಾಗೆ ಒಮ್ಮೆಲೇ ಪ್ರಾರಂಭಿಸಿ ಎರಡು ಮೂರು ಅಂಕಣಗಳಿಗೆ ನಿಲ್ಲಿಸಿ ಬಿಡಬಾರದು ಎಂಬ ಧೃಡ ನಿಶ್ಚಯದೊಂದಿಗೆ ಬ್ಲಾಗಿಸಲು ಪ್ರಾರಂಭಿಸಿದ್ದೇನೆ. ಇಂದು ನಾನು ಗೀಚಿರುವ ಕವನವೊಂದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ. ಅಂದ ಹಾಗೆ ಸಲಹೆಗಳಿಗೆ, ಟೀಕೆಗಳಿಗೆ, ಟ್ವೀಟುಗಳಿಗೆ ಮತ್ತು Shareಗಳಿಗೂ ಆದರದ ಸ್ವಾಗತ.

ವಿರಾಗಿ ಮನಸು

ಮಂದಾರ ಕುಸುಮವದು
ನಸುನಕ್ಕು ಕರೆದಿಹುದು
ಬಾ ಎಂದು ಎರವಿಡಲು,
ಮನ ಕಳೆದು ಕುಳಿತಿಹೆನು..
ಮನ ಕಳೆದು ಕುಳಿತಿಹೆನು..

ತಂಗಾಳಿ ಬೀಸಿರಲು
ಕದ ಮುಚ್ಚಿ ಮಲಗಿಹೆನು
ತೆರೆದು ನೋಡೆನೆಂಬಂತೆ,
ನಿಃಶಕ್ತಿ ಕಾಡಿಹುದು..
ನಿಃಶಕ್ತಿ ಕಾಡಿಹುದು..

ಮನದಲ್ಲಿ ವೇದನೆಯು
ಬಿಸಿಯೆದ್ದು ಆರಿಹುದು
ಬದಿಗಿಟ್ಟು ಬಸಿದಿಡಲು,
ನೀರವವೇ ತೋರುವುದು..
ನೀರವವೇ ತೋರುವುದು..

ಕಣ್ಣಿದ್ದೂ ಕುರುಡಾಗಿ
ಕಿವಿಯಿದ್ದೂ ಕಿವುಡಾಗಿ
ನೆಲೆಯಿರಲೂ ದಿಕ್ತಪ್ಪಿ,
ತೊಳಲುತಿಹುದೆನ್ನೀ ಮನವು..
ತೊಳಲುತಿಹುದೆನ್ನೀ ಮನವು..

ಸಂತೆಯ ಬೊಂಬೆಯದು
ಈ ಹೃದಯವ ಗೆದ್ದಿರಲು
ಜಗವೇ ಸಂತೆಯೆಂದು,
ನನಗಿಂದು ತೋರಿಹುದು..
ನನಗಿಂದು ತೋರಿಹುದು..

-ಶ್ರೀಶ

7 comments:

 1. ಶ್ರೀಶ ನಿಮ್ಮ ಬರವಣಿಗೆಯ ಮೊದಲ ಪ್ರಯತ್ನ ಚನ್ನಾಗಿಯೆ ಇದೆ.

  ಹಿಂಜರಿಕೆ ಬೇಡ. ತಾಯಿಯ ಹೊಟ್ಟೆಯಲ್ಲಿರುವಾಗಲೆ ಎಲ್ಲರೂ ಎಲ್ಲವನ್ನೂ ಕಲಿತೆ ಹುಟ್ಟಿರುವುದಿಲ್ಲ, ಅಂತೆಯೆ ಬರಹ "ಹಾಡಿ ಹಾಡಿ ರಾಗ"ವಾದಂತೆ. ಒಳ್ಳೆಯದಾಗಲಿ. ಅನಿಸಿದ್ದನ್ನು ಬರೆಯುವ ಬದ್ಧತೆಯಿರಲಿ. ಉತ್ಪ್ರೇಕ್ಷೆಗೆ ಹೆಚ್ಚು ಆಸ್ಪದ ಕೊಡಬೇಡಿ. ಎಲ್ಲಕ್ಕಿಂತ ಹೆಚ್ಚಾಗಿ ನೀವು ಆಳವಾಗಿ ನಂಬಿದ್ದನ್ನಷ್ಟೆ ಬರೆಯಿರಿ ಮತ್ತು ಆದನ್ನಷ್ಟೆ ಪ್ರಾಮಾಣಿಕವಾಗಿ ಬದುಕಿ.

  ಬದುಕಿಗೂ-ಬರವಣಿಗೆಗೂ ಸೂತ್ರ ಸಂಬಂಧವಿಲ್ಲದ ಆಶಾಢಭೂತಿಗಳ ಸಾಲಿಗೆ ಎಂದಿಗೂ ಸೇರದಿರಿ ಎಂದು ಹರಸುತ್ತೇನೆ.

  ಒಳ್ಳೆಯದಾಗಲಿ.

  ReplyDelete
 2. Keep going...padagala balake chennagide.

  ReplyDelete
  Replies
  1. interesting hobby !!! wish u all luck bro

   Delete
 3. Hi its very nice! Expecting many more in future:) All The Best:)

  ReplyDelete
 4. ಚಂದದ ಮುನ್ನುಡಿ ಕೊಟ್ಟು ಕವನವನ್ನೂ ಬರೆದಿದ್ದಿರಿ...
  All the very best...

  -ಸುಷ್ಮಾ ಮೂಡಬಿದರೆ..

  ReplyDelete
 5. ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು! ನಿಮ್ಮ ಕಾಳಜಿ ನನ್ನ ಜೊತೆಗೆ ಎಂದೂ ಹೀಗೆಯೇ ಇರಲಿ!!

  ReplyDelete