Saturday, August 10, 2013

ಬೇಗುದಿಯ ಮಾತು

ಒಂದಂತೂ ದಿಟ! ರೈಲಿನಲ್ಲಿ ಚಪ್ಪಾಳೆ ತಟ್ಟಿಕೊಂಡು ಬರುವ "ಅವರಿಗೆ", ನಮ್ಮ ಕೇಂದ್ರದ "ನಾಯಕ"ರಿಗಿಂತ ಹೆಚ್ಚಿನ ಪುರುಷತ್ವಇದೆ. ಸ್ವಲ್ಪ ಹೆಚ್ಚು ಕಮ್ಮಿ ಮಾತನಾಡಿದರೆ ಕಾಲರ್ ಪಟ್ಟಿ ಹಿಡಿಯುವಷ್ಟು ತಾಕತ್ತಿದೆ "ಅವರಿಗೆ". ಖಂಡಿತವಾಗಿಯೂ "ಭಾರತೀಯ ಸೈನಿಕರನ್ನು ಕೊಂದದ್ದು ಪಾಕಿಸ್ತಾನದ ಸೈನಿಕರಲ್ಲ!" ಎಂದು ಸಿನಿಕತೆಯ ಹೇಳಿಕೆ ನೀಡಿ ಸುಮ್ಮನೆ ಕುಳಿತುಕೊಳ್ಳುವಷ್ಟು ನಪುಂಸಕರಲ್ಲ "ಅವರು"!

ಹೆತ್ತ ತಾಯಿ, ಹೊತ್ತ ಭೂಮಿ ಎರಡೂ ಸ್ವರ್ಗಕ್ಕಿಂತ ಮಿಗಿಲು ಎಂಬ ಮಾತಿದೆ. ಪುರಷನಾದವ ಇಬ್ಬರ ರಕ್ಷಣೆಗೂ ಬದ್ದನಾಗಿರಬೇಕು, ಆಗಲೇ ಅವನು ಪುರುಷನೆಂದು ಮೀಸೆ ತಿರುವಿದ್ದು ಸಾರ್ಥಕವಾಗುವುದು. ಆದರೆ ಇಂದಿನ ನಮ್ಮ ಪರಿಸ್ಥಿತಿ ಬಹಳ ವಿಚಿತ್ರವಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ರೇಪ್ ಕೇಸ್ಗಳಿಂದಾಗಿ ಹೆತ್ತ ತಾಯಿಯನ್ನು ರಕ್ಷಿಸುವ ಸ್ಥಿತಿ ಎಂದೋ ಹೋಗಿದೆ. ಇದೀಗ ಪಾಪಿ ನೆರೆಯವರು ಭಕ್ಷಿಸ ಹೊರಟಿರುವ ಈ ಹೊತ್ತ ತಾಯಿಯನ್ನೂ ರಕ್ಷಿಸಲಾರದಂತಹ ದೀನ ಪರಿಸ್ಥಿತಿ ಒದಗಿ ಬಂದಿದೆ.

ತಪ್ಪು ನಮ್ಮನ್ನು ಆಳುವವರದ್ದಲ್ಲ, ಅದು ನಮ್ಮದೇ! ಯಾಕೆಂದರೆ ನಾವೇ ಹೋಗಿ ಆಳಿ ಎಂದು ಆರಿಸಿ ಕಳಿಸಿದ್ದಲ್ಲವೆ? ನಮಗೂ ಈ ದೇಶದಲ್ಲಿ ಏನಾದ್ರೂ ಚಿಂತೆಯಿಲ್ಲ, "ನಾನು" ಮತ್ತು "ನನ್ನದು" ಸುಖವಾಗಿದ್ದರೆ ಸಾಕು. ಬೇರೇನೇ ಬಿದ್ದೊದ್ರೂ ನಮಗೆ ಬೇಕಾಗಿಲ್ಲ. ಅಲ್ವೇ? ದೇಶದಲ್ಲಿ ೩೦% ರಷ್ಟು ಜನ ಒಂದೊತ್ತಿನ ತುತ್ತಿಗಾಗಿ ಭಿಕ್ಷೆ ಬೇಡುವ೦ತ್ತಿದ್ದರೂ ನಮಗೆ ಏನೂ ಅನ್ಸಲ್ಲ. ಯಾಕೆಂದರೆ, ನಾವು ಯಾವಾಗಲೂ "ಕಾಫಿ ಡೇ" ಯ ಕಾಫಿ ಹೀರುತ್ತನೋ, "pizza hut"ನ pizza ನುಂಗುತ್ತಾ ಇರೋದ್ರಿಂದ, ಈ ದೇಶದಲ್ಲಿ ಆ ರೀತಿಯ ದುನಿಯಾ ಇದೆ ಅಂತಂದ್ರೆ ನಂಬೋದೇ ಇಲ್ಲ ಬಿಡಿ. ಅಪೌಷ್ಟಿಕತೆಯಿಂದಾಗಿ ಪ್ರತಿ ನಿಮಿಷಕ್ಕೆ ನಾಲ್ಕು ಮಕ್ಕಳು ತಮ್ಮ ಐದನೇ ವರ್ಷವನ್ನೂ ಪೂರೈಸದೇ ಕಣ್ಮುಚ್ಚುತ್ತಿದ್ದಾರೆಂದು ನಮಗೆ ಗೊತ್ತೇ ಆಗುವುದಿಲ್ಲ. ಯಾಕೆಂದ್ರೆ ನಾವಿರೋದು Internet ಇರೋ First world ನಲ್ಲಿ ಅಲ್ವ? ಬೆಳಗ್ಗಿನಿಂದ ರಾತ್ರಿ ತನಕ ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ ನಲ್ಲಿ ಬ್ಯುಸಿ ಇರೋ ನಮಗೆ, ನಮ್ಮ ದೇಶದ ಬಗ್ಗೆ ಚಿಂತಿಸಲಿಕ್ಕೆ ಸಮಯವೆಲ್ಲಿದೆ ಸ್ವಾಮೀ? ಇನ್ನೇನಪ್ಪಾ ಇಂಜಿನಿಯರಿಂಗ್ ಅಂತೂ ಮುಗೀತು, ಒಂದೈದಾರು ವರ್ಷ ಬೆಂಗಳೂರಲ್ಲೋ, ಹೈದಾರಾಬಾದ್ನಲ್ಲೋ ಕೆಲಸ ಮಾಡಿ, ಒಂದೊಳ್ಳೆ ಹುಡ್ಗಿನ ಮದ್ವೆ ಆಗಿ, ಇರೋ ದುಡ್ಡಲ್ಲಿ ವಿದೇಶಕ್ಕೆ ಹಾರೋದ್ರೆ, ನನ್ ಲೈಫು ಸೆಟ್ಲ್ ಆಗುವಾಗ, ಈ ದೇಶದ ಬಗ್ಗೆ ಯೋಚಿಸಿ ನಾನೇನ್ ಮಾಡ್ಲಿ ಅಲ್ವೇ? ಅಷ್ಟಕ್ಕೂ "ಬಡತನ ಎನ್ನುವುದು ಕೇವಲ ಒಂದು ಮನಸ್ಥಿತಿ" ನಮಗೆ!!!

ಹಳೇ ಈರುಳ್ಳಿ ಗೋಣಿ ಹಂಗಿರೋ ಆ ಬಟ್ಟೆ ಹಾಕಿಕೊಂಡು, ಐದು ಇಂಚಿಗಿಂತ ದಪ್ಪಗಿರೋ ಶೂ ಸಿಕ್ಕಿಸಿ, ಅದೇ outdated riffle ಹಿಡ್ಕೊಂಡು, ಕಷ್ಟದಲ್ಲಿ ಸಿಗುವ ಒಂದೊತ್ತಿನ ಊಟ ಮಾಡಿ, ರಾತ್ರಿ ಹಗಲು ಎನ್ನದೆ, ಮಳೆ ಗಾಳಿ ಎನ್ನದೆ, ದೇಶಕ್ಕೋಸ್ಕರ ಜೀವದಾಸೆ ಬಿಟ್ಟು ಕೆಲಸ ಮಾಡ್ತಾ ಇದ್ದಾರೆ ನೋಡಿ ಆ ಪುಣ್ಯಾತ್ಮ ಸೈನಿಕರು, ಅವರಿಂದಾಗಿ ಇವತ್ತು ಇಷ್ಟಲ್ಲಾದ್ರೂ ಇದ್ದೇವೆ. ಅವ್ರೀಗೂ ಅಂತದ್ದೆಲ್ಲಾ ಮಾಡಲೇಬೇಕು ಎನ್ನುವ ಕಡೆಗಾಲ ಬಂದಿಲ್ಲ. (ನಮ್ಮಬಿಹಾರದ ಮಂತ್ರಿಗಳ ಹತ್ತಿರ ಈ ವಿಷಯ ಉಸರಬೇಡಿ!) ಅವರಿಗೂ ಪ್ರೀತಿಯ ಅಪ್ಪ ಅಮ್ಮ ಇರ್ತಾರೆ, ಅಂದದ ಮಡದಿ, ಮುದ್ದಾದ ಮಕ್ಕಳಿರುವ ತುಂಬಿದ ಸಂಸಾರವೂ ಇರುತ್ತದೆ. ಅವರನ್ನೆಲ್ಲಾ ಬಿಟ್ಟು, ಅಲ್ಲಿ ಹೋಗಿ ದುರುಳ ಪಾಕಿಗಳ ಗುಂಡು ತಿಂದು ಸಾಯಬೇಕು ಎನ್ನುವ ಅಗತ್ಯವೂ ಇಲ್ಲ. ಅವರೂ ನಮ್ಮ ಹಾಗೇ ಐದಂಕಿ ಸಂಬಳ ಎಣಿಸಿ, ಮಲ್ಟಿಪ್ಲೆಕ್ಸ್, ಮಾಲ್ಗಳನ್ನು ಸುತ್ತಿ ಚೆನ್ನಾಗಿ(?) ಬಾಳ್ವೆ ನಡೆಸಬಹುದು. ಆದ್ರೂ ಅದ್ಯಾವುದೂ ಬೇಡ ಅಂತ ತ್ಯಜಿಸಿ, ದೇಶವೇ ದೊಡ್ಡದು ಎಂದು ದೇಶ ಕಾಯುವ ಕಾಯಕಕ್ಕೆ ಹೋದವರು ಅವರು. ನಿಷ್ಪಾಪಿ ಸೈನಿಕರ ಹೆಣ ಉರುಳುವಾಗಲೂ ನಮಗೆ ಎನೂ ಅನಿಸುವುದೇ ಇಲ್ವ? ಪ್ರವಾಹ, ಭೂಕಂಪಗಳು ಘಟಿಸಿದಾಗ ರಕ್ಷಾಣಾ ಕಾರ್ಯಕ್ಕೆ ಅವರು ಬೇಕು, ನಕ್ಸಲರ ಪ್ರದೇಶದಲ್ಲಿ ತಿರುಗಾಟ ನಡೆಸುವಾಗ ನಮ್ಮ ಗಾಡಿಗಳನ್ನು ಕಾಯಲು ಅವರು ಬೇಕು. ಅಂತವರು ಎನೂ ತಪ್ಪು ಮಾಡದೆ, ವಿನಾಕಾರಣ ಗುಂಡು ತಿಂದು ದೇಶಕ್ಕಾಗಿ ಪ್ರಾಣ ತ್ಯಜಿಸಿದರೆ, ಅವರ ಆತ್ಮಕ್ಕೆ ಶಾಂತಿ ಕೋರುವಷ್ಟೂ ಮಾನವೀಯತೆ ಇಲ್ಲವೇ ನಮ್ಮಲ್ಲಿ? ಅವರ ಪಾರ್ಥೀವ ಶರೀರವನ್ನು ಸ್ವೀಕರಿಸುವಷ್ಟೂ COMMON SENSE ಇಲ್ಲವೇ? ಅದರ ಮೇಲೂ ಉಡಾಫೆಯ ಹೇಳಿಕೆ ನೀಡುವಷ್ಟು ಕಟುಕಿಗಳು ನಾವು!

ಇವತ್ತು ಉರೂರಲ್ಲಿ ಬಾಂಬ್ ಗಳು ಸ್ಪೋಟಿಸುತ್ತಿಲ್ಲ ಎಂದರೆ ಭಯೋತ್ಪಾದಕರ ಬಾಹುಗಳು ಅಲ್ಲಿ ತನಕ ತಲುಪಿಲ್ಲ ಎನ್ನುವ ಕಾರಣವೇ ಹೊರತು ನಮ್ಮ ದೇಶದ ಸರಕಾರ Security Measuresಗಳು ಅಲ್ಲ. ನೀವೇ ಯೋಚಿಸಿ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಯಾವುದೇ ರೀತಿಯ ಸೆಕ್ಯೂರಿಟಿ ಇಲ್ಲ. ನೀವು ಯಾವುದೇ ದಿಕ್ಕಿನಿಂದ, ಏನನ್ನೂ ಬೇಕಾದರೂ ಹೊತ್ತುಕೊಂಡು ನಿಲ್ದಾಣವನ್ನು ಪ್ರವೇಶಿಸಬಹುದು. ನಿಮ್ಮನ್ನು ಪ್ರಶ್ನಿಸುವವರು ಯಾರೂ ಇಲ್ಲ. ಹೀಗಿರುವಾಗ ಒಂದು ಬಾಂಬ್ ಇಟ್ಟು ಸಾವೀರಾರು ಜನರನ್ನು ಬಲಿಪಡೆಯುವುದು ಭಯೋತ್ಪಾದಕರಿಗೆ ದೊಡ್ಡ ವಿಷಯವೇನಲ್ಲ. ಒಂದು ವೇಳೆ ಅವರು ಅದನ್ನೂ ಶುರು ಹಚ್ಕೊಂಡ್ರು ಅಂತ ತಿಳ್ಕೊಳ್ಳಿ, ನಮ್ಮ ಗತಿಯನ್ನು ಊಹಿಸಲೂ ಅಸಾಧ್ಯ! ಮಾಮೂಲಿ KSRTC ಬಸ್ ಹತ್ತಲೂ ಹಿಂದೆ ಮುಂದೆ ನೋಡಬೇಕಾಗಬಹುದು. ಬೆಳಗ್ಗೆ ಮನೆಯಿಂದ ಹೊರಟರೆ ರಾತ್ರಿ ಮನೆ ತಲುಪುತ್ತೇನೋ ಇಲ್ವೋ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಇಷ್ಟೆಲ್ಲಾ ಆಗ್ತಾ ಇದ್ದರೂ, ನಾವು ಇನ್ನೂ ಎಚ್ಚೆತ್ತುಕೊಳ್ಳದ ಕಾರಣದಿಂದಲೇ, ನಮ್ಮ ರಕ್ಷಣಾ ಮಂತ್ರಿಗಳು ಸಂಸತ್ತಿನಲ್ಲಿ ಉದ್ದಟತನದ ಹೇಳಿಕೆ ನೀಡುತ್ತಾರೆ. ಈಗಿನ ಭಾರತದ ಯುವ ಸಮೂಹದಲ್ಲಿ ನನ್ನದೊಂದು ಪ್ರಶ್ನೆ, ನಮ್ಮದೇಶದಲ್ಲಿ ಈ ರೀತಿ ದೊಂಬರಾಟ ನಡೆಯುತ್ತಿರುವಾಗ ನಿಮ್ಮ ರಕ್ತ ಕುದಿಯುವುದಿಲ್ಲವೇ? ಪ್ರಾಯಶಃ ನಾವೆಲ್ಲ ಶೀತ ರಕ್ತ ಪ್ರಾಣಿಗಳೇನೋ?! ಒಂದಂತು ನಿಜ, ಎಲ್ಲಿಯಾದರೂ ನಮ್ಮ ರಕ್ತ ಕುದ್ದಿದ್ದರೆ ಈ ರೀತಿ ಗೊರಕೆ ಹೊಡೆದು ನಿದ್ರಿಸುತ್ತಿರಲಿಲ್ಲ. ನೀವೂ ಅನ್ನಬಹುದು, ನಾವು ಎಚ್ಚೆತ್ತು ಮಾಡಿದರೂ, ಏನನ್ನು ಮಾಡುವೆವು? ಅಬ್ಬಬ್ಬಾ ಎಂದರೆ ಬೊಬ್ಬೆ ಹೊಡೆಯಬಹುದೇ ವಿನಹ ಹೆಚ್ಚೇನೂ ಕಿಸಿಯಲಾರೆವು ಎಂದು. ಅಂತಹವರ ಹತ್ತಿರ ನನ್ನದೊಂದು ವಾದ. ಈ ದೇಶಕ್ಕೋಸ್ಕರ ದೊಡ್ಡ ರೀತಿಯಲ್ಲಿ ಎನೂ ಮಾಡಲಾಗದಿದ್ದರೆ, ಚಿಕ್ಕ ರೀತಿಯಲ್ಲೇ ಮಾಡೋಣ! ನಮ್ಮದೇ ಆದ ರೀತಿಯಲ್ಲಿ ಬೊಬ್ಬೆ ಹೊಡೆಯಲು ಪ್ರಾರಂಭಿಸೋಣ. ಕೊನೆ ಪಕ್ಷ ನಾವಾದರೂ ಎಚ್ಚರದಲ್ಲಿ ಇದ್ದೇವೆ ಎಂದಾಗುತ್ತದೆ, ಜೊತೆಗೆ ನಮ್ಮ ಬೊಬ್ಬೆ ಕೇಳಿ ಇನ್ನಿಬ್ಬರಾದರೂ ನಿದ್ರೆಯಿಂದ ಮೇಲೇಳಲಿ. ನಾಳೆ ಇದೇ ಚಿಕ್ಕ ಕೆಲಸ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುವುದಂತೂ ದಿಟ.

ಅಂದಹಾಗೆ CCDಯಲ್ಲಿ ಕಾಫಿ ಹೀರೋದು, ಮಲ್ಟಿಪ್ಲೆಕ್ಸ್ನಲ್ಲಿ ಚಲನಚಿತ್ರ ನೋಡುವುದು ತಪ್ಪೇನಲ್ಲ. ಆದ್ರೆ ನಾವು ಅಂತಹ ವಿಷಯಗಳ ಬಗ್ಗೆ ಎಷ್ಟು ಆಸಕ್ತಿ ವಹಿಸುತ್ತೇವೋ, ಅಷ್ಟೇ ಬದ್ಧತೆಯನ್ನು ನಮ್ಮ ದೇಶದ ಬಗ್ಗೆಯೂ ತೋರೋಣ. ಇತರ ವಿಷಯಗಳ ಬಗ್ಗೆ ಎಷ್ಟು ಆಸ್ಥೆಯಿಂದ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕುತ್ತೇವೋ, ಅಷ್ಟೇ ಆಸ್ಥೆಯಿಂದ ನಮ್ಮ ದೇಶಕ್ಕೊಂದು ಸ್ಟೇಟಸ್ ಕೊಡೋಣ. ಏನಂತೀರಿ?

-ಶ್ರೀಶ

7 comments:

 1. ಒಪ್ಪುವಂತಹ ಆಲೋಚಿಸಲೇಬೇಕಾದ ಅಂಶಗಳು. ಅರ್ಥಪೂರ್ಣ ಅಂಕಣ. ನೈಜ್ಯ ಕಾಳಜಿ.ಡಂಬೊ ಗಾಂಧಿ ತಾತ ಗಾಂಧಿಯನು replace ಮಾಡುತ್ತಿರುವ ಈ ಕಾಲಘಟ್ಟದಲ್ಲಿ ನಿಮ್ಮ ಕಳಕಳಿಯೇ ಸಮಸ್ತರಲ್ಲೂ ಉದ್ಭವಿಸಿದರೆ ದೇಶದ ಮುಕ್ಕಾಲುಪಾಲು ಸಮಸ್ಯೆ ಅಂದೆ ಮುಗಿದಂತೆ!!!

  ReplyDelete
  Replies
  1. ಧನ್ಯವಾದಗಳು ಅವೀನ್ ರವರೇ! ನೀವು ಹೇಳಿರುವುದು ನೂರಕ್ಕೆ ನೂರು ಸತ್ಯ, ಬದಲಾವಣೆ ಎನ್ನುವುದು ಪ್ರತಿಯೊಬ್ಬರ ಆಂತರ್ಯದಿಂದ ಬರಬೇಕು. ಸ್ವಇಚ್ಚೆಯಿಂದ ಎಚ್ಚೆತ್ತು, ಸಮಸ್ಯೆಯ ಪರಿಹಾರಕ್ಕಾಗಿಗಾಗಿ ಪ್ರಯತ್ನಿಸಿದರೆ ಬದಲಾವಣೆ ಖಂಡಿತವಾಗಿಯೂ ಸಾಧ್ಯ! ಅಲ್ವೇ?

   Delete
 2. ಬರಿ ಮನಸ್ಸು, ಭಾವನೆ, ಸಂಬಂಧಗಳು ಇಂತವುಗಳ ಸುತ್ತವೇ ಸುತ್ತುತ್ತಿರುವ ಬ್ಲಾಗ್ ರಾಶಿಗಳ ಮಧ್ಯೆ ನಿಮ್ಮದೊಂದು ಭಿನ್ನವಾದ ಪ್ರಯತ್ನ... ದೇಶದ ಬಗ್ಗೆ ಮಾತಾಡಿದ್ದಿರಿ, ಯೋಧರ ಬಗ್ಗೆ ಹೇಳಿದ್ದೀರಿ.. ನಾವೇನು ಅನ್ನುವನ್ನೂ ತೋರಿಸಿದ್ದೀರಿ.. ಇಷ್ಟವಾಯಿತು... ಇನ್ನೊಂದಿಷ್ಟು ಜನ ನಿಮ್ಮ ಬರಹದಿಂದ ಎಚ್ಚೆತ್ತುಕೊಳ್ಳಲಿ ಎಂಬ ಸದಾಶಯದೊಂದಿಗೆ..
  -ಸುಷ್ಮಾ ಮೂಡುಬಿದರೆ.

  ReplyDelete
  Replies
  1. ಧನ್ಯವಾದಗಳು ಸುಷ್ಮಾ ಮೂಡಬಿದರೆಯವರೇ!

   Delete
 3. nimma lekhana namma naayakru odidare svalpa JOSH bandeetu...

  tumbaa chennaagi barediddeeri...

  ReplyDelete
  Replies
  1. ಧನ್ಯವಾದಗಳು! ಅಂದಹಾಗೆ ಅವರು ಓದುವುದು ಬೇಡ ಮಾರಾಯರೇ! ಜೋಶ್ ಬಂದು ನಮ್ಮನ್ನು Block ಮಾಡಿದರೆ ಕಷ್ಟ!!

   Delete
 4. ಒಳ್ಳೆಯ ಬರಹ. ನಾವು ಆರಿಸಿದ ಜನ ನೇತಾರರು ಅನ್ನೋದು ಮಾತಿಗಷ್ಟೇ.. ನಮ್ಮನ್ನೇ ನೇತಾಕಿ ನಡೆವ ಜಾಯಮಾನ ರೂಢಿಸಿಕೊಂಡು ಬಿಟ್ಟಿದ್ದಾರೆ. ಸೈನಿಕರ ದಾರುಣ ಸಾವು ನಿಜಕ್ಕೂ ವಿಷಾಧನೀಯ. ಸತ್ತವರು ಮಂತ್ರಿಗಳ ಮಕ್ಕಳಲ್ಲವಲ್ಲಾ ??

  ReplyDelete